Áಮದೇವ (ಪಾಂಡ್ಯರಾಜ)

 ಉಚ್ಚಂಗಿ ಪಾಂಡ್ಯ ಮನೆತನದ ಕೊನೆ ಅರಸ. 1161ರಿಂದ 1187ರ ವರೆಗೆ ಆಳಿದ. ವಿಜಯ ಪಾಂಡ್ಯನೆಂದೂ ಇವನಿಗೆ ಹೆಸರಿತ್ತು. 11-12ನೆಯ ಶತಮಾನಗಳಲ್ಲಿ ಪಾಂಡ್ಯರು ಕಲ್ಯಾಣದ ಚಾಳುಕ್ಯರ ಸಾಮಂತರಾಗಿ, ಉಚ್ಚಂಗಿಯನ್ನು ರಾಜಧಾನಿಯಾಗಿ ಮಾಡಿಕೊಂಡು ಇಂದಿನ ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳ ಹಲವು ಭಾಗಗಳನ್ನೊಳಗೊಂಡ ನೊಳಂಬವಾಡಿ ಎಂಬ ರಾಜ್ಯವನ್ನು ಆಳುತ್ತಿದ್ದರು. ಕಾಮದೇವನ ಆಳ್ವಿಕೆಯ ಪ್ರಾರಂಭಕ್ಕೆ ಮೊದಲೇ ಕಲ್ಯಾಣ ಚಾಳುಕ್ಯರ ಸಿಂಹಾಸನವನ್ನು ಕಳಚುರಿ ಮನೆತನದ ಬಿಜ್ಜಳ ಆಕ್ರಮಿಸಿಕೊಂಡಿದ್ದ. ಈತ 1162ರಲ್ಲಿ ಕಾಮದೇವನನ್ನು ಸೋಲಿಸಿದ. ಆದರೂ ಕಾಮದೇವ ಪದಚ್ಯುತರಾದ ಚಾಳುಕ್ಯರ ಪಕ್ಷಪಾತಿಯಾಗಿದ್ದ. 1177ರಲ್ಲಿ ಹೊಯ್ಸಳ ಇಮ್ಮಡಿ ವೀರಬಲ್ಲಾಳ ಉಮ್ಮತ್ತೂರಿನಲ್ಲಿ ಕಾಮದೇವನನ್ನು ಸೋಲಿಸಿ ದುರ್ಗಮವಾದ ಉಚ್ಚಂಗಿಯನ್ನು ಮುತ್ತಿ, ಕಾಮದೇವನಿಂದ ಅಪಾರ ಕಪ್ಪಕಾಣಿಕೆಗಳನ್ನು ಪಡೆದ. ಅವನ ರಾಜ್ಯವನ್ನು ಅವನಿಗೇ ಹಿಂತಿರುಗಿಸಿ, ಪಾಂಡ್ಯರಾಜಪ್ರತಿಷ್ಠಾಪನಾಚಾರ್ಯ ಎಂಬ ಬಿರುದನ್ನು ತಳೆದ. 1184ರಿಂದ 1187ರ ವರೆಗೆ ಕಾಮದೇವ ಪುನಃ ಸ್ಥಾಪಿಸಲಾದ ಕಲ್ಯಾಣ ಚಾಳುಕ್ಯ ರಾಜ್ಯದ ನಾಲ್ಮಡಿ ಸೋಮೇಶ್ವರನ ಪಕ್ಷ ವಹಿಸಿದ. ಇದರಿಂದ ಕೋಪಗೊಂಡ ಬಲ್ಲಾಳ 1187ರಲ್ಲಿ ಉಚ್ಚಂಗಿಯನ್ನು ಮುತ್ತಿದ. ಯುದ್ಧದಲ್ಲಿ ಕಾಮದೇವನೂ ಆತನ ಮಗನಾದ ಒಡೆಯನೂ ಮರಣ ಹೊಂದಿದರು. ನೊಳಂಬವಾಡಿ ಹೊಯ್ಸಳ ಸಾಮ್ರಾಜ್ಯದಲ್ಲಿ ಸೇರಿತು.

(ನೋಡಿ- ಉಚ್ಚಂಗಿ-ಪಾಂಡ್ಯರು)        

 (ಜಿ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ